ಬೆತ್ತಲೆ ಫೋಟೋ ಪ್ರಕಟ: ಯುಪಿ ಸಿಎಂ ವಿರುದ್ಧ ಮಹಿಳೆ ದೂರು ದಾಖಲು

ಗುವಾಹಟಿ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಅಸ್ಸಾಂ ನ ಆದಿವಾಸಿ ಮಹಿಳೆಯೊಬ್ಬರು ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧರಿಸಿದ್ದಾರೆ.
ಆದಿವಾಸಿ ಮಹಿಳೆ ಬೆತ್ತಲೆಯಾಗಿ  ರಸ್ತೆಯಲ್ಲಿ ಓಡುತ್ತಿರುವ 10 ವರ್ಷದ ಹಿಂದಿನ ಫೋಟೋವನ್ನು ಯೋಗಿ ಆದಿತ್ಯನಾಥ್ ಹೆಸರಿನ ಫೇಸ್ ಬುಕ್ ಅಕೌಂಟ್ ನಲ್ಲಿ ಪ್ರಕಟಿಸಲಾಗಿದ್ದು,. ಈ ಸಂಬಂಧ ಉತ್ತರ ಪ್ರದೇಶ ಸಿಎಂ ಮತ್ತು ಬಿಜೆಪಿ ತೇಜ್ ಪುರ್ ಸಂಸದ ಆರ್ ಪಿ ಶರ್ಮಾ ವಿರುದ್ಧ ಕೇಸು ದಾಖಲಿಸಲು ತೀರ್ಮಾನಿಸಿದ್ದಾರೆ.

 

ಯೋಗಿ ಆದಿತ್ಯನಾಥ್ ಹೆಸರಿನ ಫೇಸ್ ಬುಕ್ ಖಾತೆಯಲ್ಲಿ ಪ್ರಕಟಿಸಿದ ಮಹಿಳೆಯ ಬೆತ್ತಲೆ ಫೋಟೋವನ್ನು ಸಂಸದ ಶರ್ಮಾ ಶೇರ್ ಮಾಡಿದ್ದರು.ಅಸ್ಸಾಂನ ಆದಿವಾಸಿ ವಿದ್ಯಾರ್ಥಿ ಸಂಘಟನೆ  ಭಾನುವಾರ ಅಸ್ಸಾಂ ಡಿಜಿಪಿ ಅವರನ್ನು ಭೇಟಿ ಮಾಡಿ ಫೋಟೋ ಪೋಸ್ಟ್ ಮಾಡಿದ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದ್ದು ಅದು, ಯೋಗಿ ಆದಿತ್ಯನಾಥ್ ಅವರದ್ದೇ ಫೇಸ್ ಬುಕ್ ಖಾತೆ ಎಂದು ಕ್ವಿಂಟ್ ವರದಿ ಮಾಡಿದೆ. ಫೋಟೋ ಶೇರ್ ಮಾಡಿರುವ  ಫೇಸ್ ಬುಕ್ ಖಾತೆಗೆ ಸುಮಾರು 95 ಸಾವಿರ ಮಂದಿ ಹಿಂಬಾಲಕರಿದ್ದಾರೆ ಎಂದು ಅಸ್ಸಾಂ ಡಿಜಿಪಿ  ಮುಖೇಶ್ ಸಹಾಯ್ ಹೇಳಿದ್ದಾರೆ..
ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಪರ ಘೋಷಣೆ ಕೂಗಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಹಿಂದು ಮಹಿಳೆಯನ್ನು ಬೆತ್ತಲೆಗೊಳಿಸಿದ್ದಾರೆ. ಹೀಗಾಗಿ ಜನರು ಈ ಪೋಟೋವನ್ನು ಶೇರ್ ಮಾಡಿ ಕಾಂಗ್ರೆಸ್ ನ ನಿಜ ಬಣ್ಣ ಬಯಲು ಮಾಡಬೇಕು ಎಂದು ಪೋಸ್ಟ್ ಮಾಡಲಾಗಿದೆ. ಫೇಸ್ ಬುಕ್ ಪೋಸ್ಟ್ ಪ್ರಕಾರ ಈ ಘಟನೆ ಬೆಂಗಾಲ್ ಎಂಬಲ್ಲಿ ನಡೆದಿದ್ದು, ಸಮಯವನ್ನು ಪ್ರಕಟಿಸಿಲ್ಲ.
2007ರ ನವೆಂಬರ್ 26 ರಂದು ಆದಿವಾಸಿ ಮಹಿಳೆಯನ್ನು ಬೆತ್ತಲೆಗೊಳಿಸಿ ರಸ್ತೆಯಲ್ಲಿ ಓಡಿಸಲಾಗಿತ್ತು. ಈ ವೇಳೆ ನಗರದ ಕೆಲ ಯುವಕರು ಫೋಟೋ ಕ್ಲಿಕ್ ಮಾಡಿದ್ದರು. ಪ್ರಕರಣದ ನಂತರ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದರು ಎಂದು ಸಂತ್ರಸ್ತ ಮಹಿಳೆ ಲಕ್ಷ್ಮಿ ಆರಂಗ್ ಹೇಳಿದ್ದಾರೆ.
ಅದಿವಾಸಿ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಹಿಂಸಾಚಾರ ನಡೆದಿತ್ತು. ಆನಂತರ ಆಕೆ ಮದುವೆಯಾಗಿ ಗಂಡು ಮಗುವಿನ ತಾಯಿಯಾಗಿದ್ದಾಳೆ. ನ್ಯಾಯ ಸಿಗುವವೆರಗೂ ತನ್ನ ಹೋರಾಟ ನಿಲ್ಲುವುದಿಲ್ಲ ಎಂದು ಲಕ್ಷ್ಮಿ ನ್ಯೂ ಇಂಡಿಯನ್ ಎಕ್ರ್ ಪ್ರೆಸ್ ಗೆ ಹೇಳಿದ್ದಾರೆ.
ನನ್ನ ವಕೀಲರ ಜೊತೆ ಈಗಾಗಲೇ ನಾನು ಚರ್ಚಿಸಿದ್ದೇನೆ, ಯೋಗಿ ಆದಿತ್ಯನಾಥ್ ಮತ್ತು ಸಂಸದ ಆರ್ ಪಿ ಶರ್ಮಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧರಿಸಿದ್ದೇನೆ. ಇಂಥಹ ಪೋಸ್ಟ್ ಗಳನ್ನು ಹಾಕುವ ಮುನ್ನ ಯುಪಿ ಸಿಎಂ ಗಮನಹರಿಸಬೇಕಿತ್ತು. ಅವರ ಕುಟುಂಬದಲ್ಲಿ ಯಾರಿಗಾದರೂ ಈ ಘಟನೆ ನಡೆದಿದ್ದರೇ ಇದೇ ರೀತಿ ಮಾಡುತ್ತಿದ್ದರಾ ಎಂದು ಪ್ರಶ್ನಿಸಿದ್ದಾರೆ. ನನ್ನ  ಬೆತ್ತಲೆ ಫೋಟೋ ಬಳಸಿಕೊಂಡು ಲಾಭ ಪಡೆದುಕೊಳ್ಳುವುದನ್ನು ನಾನು ಸಹಿಸಿಕೊಳ್ಳಲಾರೆ ಎಂದು ಆಕೆ ತಿಳಿಸಿದ್ದಾರೆ.
ನನಗಾದ ಈ ಅವಮಾನದಿಂದ ಕಳೆದ 10 ವರ್ಷಗಳಿಂದ ನೋವು ಅನುಭವಿಸುತ್ತಿದ್ದೇನೆ. ಹೀಗಾಗಿ ಯೋಗಿ ಆದಿತ್ಯನಾಥ್ ಮತ್ತು ಸಂಸದ ಆರ್ ಪಿ ಶರ್ಮಾ ಅವರನ್ನು ಬಂಧಿಸದಿದ್ದರೇ ನನ್ನ ಮಗುವಿನ ಜೊತೆಯಲ್ಲಿ ರಸ್ತೆಯಲ್ಲಿ ಧರಣಿ ನಡೆಸುವುದಾಗಿ ಆಕೆ ಹೇಳಿದ್ದಾರೆ.

Category: